ಗದಗ: ಅರವತ್ತು ಅಡಿ ಪಾಳುಬಾವಿಗೆ ಬಿದ್ದ ಬೆಕ್ಕನ್ನು ಸ್ಥಳಿಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆಗೂಡಿ ಮೂಕ ಪ್ರಾಣಿ ಬೆಕ್ಕನ್ನು ರಕ್ಷಣೆ ಮಾಡಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ವಾರದ ಹಿಂದೆಯೇ 60 ಅಡಿ ಪಾಳುಬಿದ್ದ ಬಾವಿಯಲ್ಲಿ, ಸಾಕುಬೆಕ್ಕು ಬಿದ್ದಿದೆ. ಮೂಕ ಪ್ರಾಣಿ ಮೇಲೆ ಬರಲಾಗದೇ, ವಾರಾನುಗಟ್ಟಲೇ ಸಾಕಷ್ಟು ಪರದಾಟ ಅನುಭವಿಸಿದೆ. ಬೆಕ್ಕಿನ ಸಂಕಟ ನೋಡಲಾಗದೇ ಸ್ಥಳಿಯರು, ಬೆಕ್ಕಿನ ನರಳಾಟ ಕಂಡು ದಿನಂಪ್ರತಿ, ಹಗ್ಗ ಹಾಗೂ ಬಕೇಟ್ ಮೂಲಕ ಹಾಲು, ಬ್ರೆಡ್ ಸೇರಿದಂತೆ, ಅದಕ್ಕೆ ಆಹಾರ ಒದಗಿಸೋ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಂತರ, ಸ್ಥಳಿಯ ಪತ್ರಕರ್ತರೊಬ್ಬರ ಆಸಕ್ತಿಯಿಂದ, ಅಗ್ನಿಶಾಮಕ ಸಿಬ್ಬಂದಿ ಸಹಾಯದೊಂದಿಗೆ, ಸ್ಥಳಿಯರೆಲ್ಲರೂ ಕೂಡಿಕೊಂಡು ಮಾರ್ಜಾಲದ ಪ್ರಾಣ ರಕ್ಷಿಸಿದ್ದಾರೆ.ಜೀವದ ಹಂಗು ತೊರೆದು, ಹಗ್ಗದ ಮೂಲಕ ಬಾವಿಗೆ ಇಳಿದು, ಬಾವಿಯಿಂದ ಬೆಕ್ಕನ್ನು ಮೇಲಕ್ಕೆ ತೆಗೆದುಕೊಂಡು ಬಂದಿದ್ದಾರೆ.
ನಿಟ್ಟುಸಿರು ಬಿಟ್ಟ ಬೆಕ್ಕು, ಬದುಕಿದೆನೆಪ್ಪಾ! ಎಂದು ದಿಕ್ಕೆಟ್ಟು ಸ್ಥಳದಿಂದ ಕಾಲ್ಕಿತ್ತಿದೆ. ಅದೇನೆ, ಇರಲಿ ಪ್ರಾಣಿಗಳ ಜೀವಕ್ಕೆ ಕುತ್ತು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ, ಬಾವಿಗೆ ಬಿದ್ದ ಬೆಕ್ಕನ್ನ ಬದುಕಿಸುವ ಮೂಲಕ, ಮಾನವೀಯತೆ ಮೆರೆದಿದ್ದು, ಮೂಕ ಪ್ರಾಣಿಯ ರಕ್ಷಣಾ ಕಾರ್ಯಕ್ಕೆ ಜನ್ರು ಭೇಷ್ ಎಂದಿದ್ದಾರೆ.