ಮುಂಡರಗಿ:ತಾಲೂಕಿನ ಕೆಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ 79ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ, ವರ್ಣರಂಜಿತವಾಗಿ ಆಚರಿಸಲಾಯಿತು.
ಧ್ವಜಾರೋಹಣವನ್ನು ಅಂಗನವಾಡಿ ಕೇಂದ್ರ ಹಾಗೂ ಶಾಲಾ ಆವರಣದಲ್ಲಿ ಶಿಕ್ಷಕಿ ಪಲ್ಲವಿ ತಿಮ್ಮಾಪೂರ ಅವರ ನೇತೃತ್ವದಲ್ಲಿ, ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ ಒಂಟೇಲಿ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀದೇವಪ್ಪ ಕಲಿವಾಳ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯಗುರುಗಳಾದ ಶ್ರೀಈರಪ್ಪ ಸೊರಟೂರ ಮಾತನಾಡಿ, “ದೇಶ ನಿರ್ಮಾಣ ತರಗತಿ ಕೋಣೆಯಿಂದಲೇ ಆರಂಭವಾಗುತ್ತದೆ. ಲಕ್ಷಾಂತರ ಜನರ ತ್ಯಾಗ-ಬಲಿದಾನಗಳಿಂದ ದೊರೆತ ಈ ಸ್ವಾತಂತ್ರ್ಯ ನಮ್ಮೆಲ್ಲರ ಸೌಭಾಗ್ಯ” ಎಂದು ಹೇಳಿದರು.
ಮಕ್ಕಳಿಂದ “ಕ್ರಾಂತಿಯ ಕಿಡಿ ರಾಯಣ್ಣ”, “ಸ್ವಾತಂತ್ರ್ಯ ಸ್ಪೂರ್ತಿ ಭಗತ್ ಸಿಂಗ್” ಕಿರು ನಾಟಕಗಳು, ಕೊರವಂಜಿ ಕಣಿ ಹಾಸ್ಯಗೀತೆ, ಹಾಗೂ ಪರಿಸರ ಕಾಳಜಿಯ ಗೀತೆಗಳು ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳ ಕಲಾತ್ಮಕ ಅಭಿನಯವು ಜನರನ್ನು ಸಂಗೊಳ್ಳಿರಾಯಣ್ಣ ಮತ್ತು ಭಗತ್ ಸಿಂಗ್ ಅವರ ಜೀವನ ಕಥೆ ನೆನೆಸುವಂತೆ ಮಾಡಿತು.
ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಹಂಪಾದೇವನಹಳ್ಳಿ ಶಾಲೆಯ ಶಿಕ್ಷಕಿ ಪ್ಯಾರಿಜಾನ್ ಅವರು ₹25,000 ಮೌಲ್ಯದ ಟೀ-ಶರ್ಟ್ ಮತ್ತು ಪ್ಯಾಂಟ್‌ಗಳನ್ನು ಎಲ್ಲಾ ಮಕ್ಕಳಿಗೂ ಕೊಡುಗೆಯಾಗಿ ನೀಡಿದರು. ಗುಪ್ತ ಕಾಣಿಕೆಯಾಗಿ ಟೈ, ಬೆಲ್ಟ್ ಹಾಗೂ 52 ತಟ್ಟೆ ಅನ್ನ ನೀಡುವ ಪರಾತಗಳನ್ನು ನೀಡಿದರು. ಎಸ್.ಡಿ.ಎಮ್.ಸಿ ಸದಸ್ಯ ಶ್ರೀಯಲ್ಲಪ್ಪ ಜಗದೂರ 80 ಮಕ್ಕಳಿಗೆ ನೋಟಬುಕ್ ಮತ್ತು ಪೆನ್ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಮಾರಿ ನಯನ ತಿಮ್ಮಾಪೂರ (ಕೊರವಂಜಿ), ಕುಮಾರಿ ಶಿಲ್ಪಾ ಕಲಿವಾಳ (ಕಿತ್ತೂರು ರಾಣಿ ಚೆನ್ನಮ್ಮ), ಕುಮಾರ ನಂದೀಶ ನಿಟ್ಟಾಲಿ (ರಾಯಣ್ಣ), ಕುಮಾರ ದರ್ಶನ ಸಿಗರಗಡ್ಡಿ (ಭಗತ್ ಸಿಂಗ್) ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾತ್ರ ನಿರ್ವಹಿಸಿ ಜನರ ಮೆಚ್ಚುಗೆ ಪಡೆದರು.
ಗ್ರಾಮದ ಹಿರಿಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಎಸ್.ಡಿ.ಎಮ್.ಸಿ ಸದಸ್ಯರು ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಶಂಸಿಸಿದರು. ಶಿಕ್ಷಕಿಯರಾದ ಸುಧಾ ಬಸವಣ್ಣೆಪ್ಪ ಪಾಟೀಲ, ಯಶೋಧಾ ಕರೆಕಲ್ಲ (ಡಂಬ್ರಳ್ಳಿ), ಕಾವ್ಯ ವಿನೋದ ತಿಮ್ಮಾಪೂರ, ವಿಜಯಾ ಮುಂತಾದವರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು. ನಿರೂಪಣೆ ಸುಧಾ ಪಾಟೀಲ ಹಾಗೂ ವಂದನೆ ಕಾವ್ಯ ವಿನೋದ ತಿಮ್ಮಾಪೂರರಿಂದ ನಡೆಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಭೀಮಣ್ಣ ದೊಡ್ಡಮನಿ ಮಕ್ಕಳುಗಳಿಗೆ ಬೂಂದಿ ಸಿಹಿ ವಿತರಿಸಿದರು. ಗ್ರಾಮಸ್ಥರ ಉಪಸ್ಥಿತಿಯಿಂದ 79ನೇ ಸ್ವಾತಂತ್ರ್ಯೋತ್ಸವವು ಶಾಲೆಗೆ ಹೆಮ್ಮೆ ತರಿಸುವಂತಹದ್ದಾಗಿ ಪರಿಣಮಿಸಿತು.