ಗದಗ : ಸ್ವಾತಂತ್ರ್ಯೋತ್ಸವದಂದು ಭಾರತದ ಸ್ವಾತಂತ್ರ್ಯತೆಯ ಕಥನವನ್ನು ಮೆಲುಕು ಹಾಕುವುದರ ಜೊತೆಗೆ ಪ್ರಜೆಗಳಾಗಿ ನಮ್ಮ ಆತ್ಮಾವಲೋಕನ ಮಾಡಿಕೊಳ್ಳುವುದು ಸಹ ಪ್ರಸ್ತುತವೆನಿಸುತ್ತದೆ ಎಂದು ಉಪನ್ಯಾಸಕರಾದ ಪ್ರೊ.ವೀರೇಶ ಹರ್ಲಾಪೂರ ಅಭಿಪ್ರಾಯಪಟ್ಟರು.
ಅವರು ದಿ.೧೫ ರಂದು ನಗರದ ಸ್ಟುಡೆಂಟ್ಸ್ ಎಜುಕೇಶನ್ ಸೊಸೈಟಿಯ ಸನ್ಮಾರ್ಗ ಪದವಿ ಪೂರ್ವ ಕಾಲೇಜಿನಲ್ಲಿ ೭೯ನೇ ಸ್ವಾತಂತ್ರ್ಯೋತ್ಸವದ ನಿಮಿತ್ಯ ಧ್ವಜಾರೋಹಣಗೈದು ಮಾತನಾಡಿದರು.
ಇಂದಿನ ಯುವ ಪೀಳಿಗೆ ಸ್ವಾತಂತ್ರ್ಯೋತ್ಸವದ ಮೌಲ್ಯವನ್ನು ಅರಿಯಬೇಕಿದ್ದು, ಸಾವಿರಾರು ಹೋರಾಟಗಾರರ ತ್ಯಾಗ-ಬಲಿದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯೋತ್ಸವದ ಸ್ವೇಚ್ಛಾರವಾಗದಂತೆ ಎಚ್ಚರ ವಹಿಸಬೇಕಿದೆ. ದೇಶದ ಏಳಿಗೆಯಲ್ಲಿ ಮತದಾನ ಮಹತ್ವದ ಪಾತ್ರ ವಹಿಸುವುದರಿಂದ ಸಾತ್ವಿಕರನ್ನು ಅಧಿಕಾರಕ್ಕೆ ತರುವುದು ಅನಿವಾರ್ಯವಾಗಿದೆ. ಇಂದಿನ ದಿನಗಳಲ್ಲಿ ಸಮೂಹಸನ್ನಿಯ ಪ್ರಭಾವದಿಂದ ಎಡ ಅಥವಾ ಬಲಪಂಥಕ್ಕೆ ಸಿಲುಕಿಕೊಳ್ಳದೆ ಯಾವುದೇ ಸಿದ್ಧಾಂತ ಅಥವಾ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವೈಯಕ್ತಿಕ ದೃಷ್ಠಿಕೋನ ಹೊಂದಬೇಕು. ಭಾರತದ ಪರಂಪರೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಹೊಣೆ ಹೊತ್ತಿರುವ ವಿದ್ಯಾರ್ಥಿಗಳು ಈ ದೇಶದ ಬೇರುಗಳನ್ನು ಮರೆಯದೆ ಪಾಶ್ವಾತ್ಯೀಕರಣಕ್ಕೆ ಜೋತು ಬೀಳದೇ ಅಸ್ಮಿತೆ ಕಾಪಾಡಬೇಕೆಂದು ಕರೆ ನೀಡಿದರು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಪ್ರೇಮಾನಂದ ರೋಣದ ಮಾತನಾಡಿ, ಸ್ವಾತಂತ್ರ್ಯೋತ್ಸವದ ಹೋರಾಟದ ರೋಚನ ಕಥಾನಕವನ್ನು ವಿವರಿಸಿದರಲ್ಲದೆ ವಿದ್ಯಾರ್ಥಿಗಳಿಗೆ ಅವರ ಹಕ್ಕು ಹಾಗೂ ಕರ್ತವ್ಯಗಳ ಬಗೆಗೆ ಜಾಗೃತಿ ಮೂಡಿಸಿದರು.
ಉಪನ್ಯಾಸಕರಾದ ಪ್ರೊ.ಹೇಮಂತ್ ದಳವಾಯಿ ಸರ್ವರನ್ನೂ ಸ್ವಾಗತಿಸಿ ಸ್ವಾತಂತ್ರ್ಯೋತ್ಸವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಟುಡೆಂಟ್ಸ್ ಎಜುಕೇಶನ್ ಸೊಸೈಟಿಯ ಚೇರಮನ್‌ರಾದ ಪ್ರೊ.ರಾಜೇಶ ಕುಲಕರ್ಣಿ, ಆಡಳಿತಾಧಿಕಾರಿಗಳಾದ ಶ್ರೀ ಎಂ.ಸಿ. ಹಿರೇಮಠ ಹಾಗೂ ಆಡಳಿತ ಮಂಡಳಿಯ ಸದ್ಯಸರಾದ ಪ್ರೋ.ರೋಹಿತ್, ಪ್ರೊ.ರಾಹುಲ್ ಒಡೆಯರ್, ಪ್ರೋ.ಸೈಯದ್ ಮತೀನ್ ಮುಲ್ಲಾ, ಪ್ರೊ. ಉಡುಪಿ ದೇಶಪಾಂಡೆ, ಹಾಗೂ ಬೊಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.