ಗದಗ: ನಗರದ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ೭೭ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಎಂ.ಸಿ. ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯಾನಂತರ ರಾಷ್ಟ್ರದ ಸುಸ್ಥಿರತೆ, ಸಮೃದ್ಧಿ ಹಾಗೂ ಏಕತೆಗಾಗಿ ಅನುಸರಿಸಬೇಕಾದ ತತ್ವಗಳು ಮತ್ತು ಮೌಲ್ಯಗಳನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಆದರೆ ಇಂದಿನ ಯುವಜನತೆ ಸಂವಿಧಾನದ ಅರಿವಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಅವರು ಹೇಳಿದರು. ಭಾರತದ ಭವಿಷ್ಯವನ್ನು ರೂಪಿಸುವ ಯುವಜನಾಂಗವು ಸಂವಿಧಾನದ ಆಶಯಗಳನ್ನು ಅರಿತು, ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಚೇರ್ಮನ್ ಪ್ರೊ. ರಾಜೇಶ್ ಕುಲಕರ್ಣಿ ಅವರು, ಸಂವಿಧಾನದಲ್ಲಿರುವ ‘ಸಾಮಾಜಿಕ ನ್ಯಾಯ’ ಎಂಬ ಪದವು ವಿಶಾಲ ಅರ್ಥವನ್ನು ಹೊಂದಿದ್ದು, ಅದು ಕೇವಲ ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ ರಾಷ್ಟ್ರದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಲಯಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು. ಪ್ರಪಂಚದ ಅನೇಕ ರಾಷ್ಟ್ರಗಳ ಸಂವಿಧಾನಗಳ ಉತ್ತಮ ಅಂಶಗಳನ್ನು ಒಳಗೊಂಡಿರುವುದರ ಜೊತೆಗೆ, ನಮ್ಮ ದೇಶದ ಆದರ್ಶಗಳು ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಅಂಶಗಳನ್ನು ಸಮರ್ಥವಾಗಿ ಒಳಗೊಂಡಿರುವ ‘ಪ್ರಪಂಚದ ಬೃಹತ್ ಸಂವಿಧಾನ’ ನಮ್ಮದು ಎಂಬ ಹೆಮ್ಮೆ ಪ್ರತಿಯೊಬ್ಬ ಭಾರತೀಯನಲ್ಲೂ ಇರಬೇಕು ಎಂದರು.
ಸಾಂದರ್ಭಿಕವಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಹಾಗೂ ಗಣಿತಶಾಸ್ತ್ರ ಉಪನ್ಯಾಸಕರಾದ ಪ್ರೊ. ಪುನೀತ ದೇಶಪಾಂಡೆ ಅವರು, ನಾವು ಕೇವಲ ‘ಸಾಂವಿಧಾನಿಕ ಹಕ್ಕು’ಗಳ ಬಗ್ಗೆ ಮಾತ್ರ ಗಮನ ಹರಿಸಿದರೆ ಸಾಲದು. ಅದರ ಜೊತೆಗೆ ಇರುವ ‘ಸಾಂವಿಧಾನಿಕ ಕರ್ತವ್ಯ’ಗಳನ್ನು ಅರಿತು, ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ನಾವು ಭಾರತೀಯರಾದ ನೈಜ ಅರ್ಥದಲ್ಲಿ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಗಣರಾಜ್ಯೋತ್ಸವದ ಮಹತ್ವದ ಕುರಿತು ಪಕ್ಷಿನೋಟ ಬೀರಿದ ವಿದ್ಯಾಲಯದ ಪ್ರಚಾರ್ಯರಾದ ಪ್ರೊ. ಪ್ರೇಮಾನಂದ ರೋಣದ ಅವರು, ಭಾರತೀಯರಾಗಿ ನಮ್ಮ ಸಾಮಾಜಿಕ ಅಸ್ಮಿತೆಯ ಅಂತಿಮ ಅಡಿಪಾಯವನ್ನು ಸಂವಿಧಾನವೇ ಒದಗಿಸುತ್ತದೆ ಎಂದು ತಿಳಿಸಿದರು. ವಸಾಹತುಶಾಹಿ ಮನೋಭಾವನೆಗಳಿಂದ ಹೊರಬರಲು ಇತ್ತಿಚೀನ ದಶಕಗಳಲ್ಲಿ ದೇಶದಲ್ಲಿ ನಡೆದಿರುವ ಅನೇಕ ಯಶಸ್ವಿ ಪ್ರಯತ್ನಗಳನ್ನು ಇಡೀ ವಿಶ್ವವೇ ಗಮನಿಸುತ್ತಿರುವುದು ಸತ್ಯವೆಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ರೋಹಿತ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ಉಡುಪಿ ದೇಶಪಾಂಡೆ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
