ಗದಗ: ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಮುಖ್ಯವಾಗಿ ಕಲಿಸಬೇಕಾಗಿದೆ. ಆ ಜವಾಬ್ದಾರಿಯನ್ನು ಮನೆಯಲ್ಲಿ ಪಾಲಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಮಾಡಲೇಬೇಕು, ಅಂದಾಗ ಮಾತ್ರ ಭವಿಷ್ಯತ್ತಿನ ನಮ್ಮ ಭಾವಿ ಪ್ರಜೆಗಳು, ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯ ಎಂದು ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಅವರು ಹೇಳಿದರು.
ನಗರದ ಪ್ರತಿಷ್ಟಿತ ಸಂಸ್ಥೆಯಾದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸುರಿದ ಮಳೆಯನ್ನು ಸರಿಯುವ ವೇಳೆಯನ್ನು ಸರಿಯಾಗಿ ಬಳಸಿಕೊಳ್ಳುವರೇ ಜಾಣರು ಎನ್ನುವ ನುಡಿಯಂತೆ ಸಮಯಕ್ಕೆ ಗೌರವಕೊಟ್ಟು ಸಮಯದ ಸಾರ್ಥಕ ಬಳಕೆಯಿಂದ ಕೆಲಸ ಮಾಡಿದರೆ ಸಾಧಕರಾಗಲು ಸಾಧ್ಯ. ದೇಶಾಭಿಮಾನಿ, ಆದರ್ಶ, ಅನುಕರಣೀಯ ಯುವ ಜನರೇ ನಮ್ಮ ದೇಶದ ಆಸ್ತಿ ಮತ್ತು ಶಕ್ತಿ. ಹೀಗಾಗಿ ಅವರಿಂದ ಮಾತ್ರವೇ ಭ್ರಷ್ಟಾಚಾರ ಮುಕ್ತವಾದ ಸಶಕ್ತ, ಸಮೃದ್ಧ ಭಾರತದ ನಿರ್ಮಾಣ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದೇ ವೇಳೆ ತಾವು ರಚಿಸಿರುವ ಪುಸ್ತಕದ ಕುರಿತು ಮಾಹಿತಿ ಹಂಚಿಕೊಂಡ ಅವರು, ಭ್ರಷ್ಟಾಚಾರಮುಕ್ತ ಭಾರತ ನಿರ್ಮಾಣಕ್ಕೆ ಬದ್ಧರಾದ ಯುವ ಜನರಿಗೆಂದೇ ‘ದೇಶದ ಚಿತ್ತ ಯುವ ಜನರತ್ತ’ಎಂಬ ಕೃತಿಯನ್ನು ಬರೆದಿದ್ದು, ಕೊಂಡು ಓದುವುದರೊಂದಿಗೆ ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಹಾಗೂ ಛಲವುಳ್ಳ ಎಲ್ಲ ವಿದ್ಯಾರ್ಥಿಗಳು ಓದಿ ಸಾಧಕರಾಗಬೇಕು ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲರಾದ ಬಿ. ಎಫ್. ಚೇಗರೆಡ್ಡಿ ಮಾತನಾಡಿ, ನಮ್ಮ ಸಂವಿಧಾನವು 9 ನೇ ಡಿಸೆಂಬರ್ 1947 ರಿಂದ 26 ನೇ ನವೆಂಬರ್ 1949 ರ ಮಧ್ಯ, ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು 26ನೇ ಜನೇವರಿ 1950 ರಂದು ಜಾರಿಗೆ ಬಂದಿತು. ಅಂದಿನಿಂದ ಭಾರತದಲ್ಲಿ ಪ್ರತಿವರ್ಷ ಜನೇವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ.

ಭಾರತ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ. ಬಿ. ಆರ್. ಅಂಬೇಡ್ಕರ ಅವರೊಂದಿಗೆ ಇತರ ಆರು ಸದಸ್ಯರ ಸಮಿತಿ ನೇಮಕಗೊಂಡು ಭಾರತ ಸಂವಿಧಾನದ ಕರಡು ಪ್ರತಿಯನ್ನು ರಚಿಸಿಕೊಟ್ಟರು.ಈ ಸಂವಿಧಾನದ ಮೂಲಕ ನಮ್ಮ ದೇಶದ ರಾಷ್ಟ್ರಪತಿಯವರನ್ನು ನಾವೇ ಆಯ್ಕೆ ಮಾಡುವ ಹಕ್ಕನ್ನು ಪಡೆದೆವು.
ಈ ಮೊದಲು 1947 ರಿಂದ 1950 ರ ವರೆಗೆ ನಮ್ಮ ರಾಜ್ಯದ ಗೌವರ್ನರ್ ಜನರಲ್‌ರನ್ನು ಬ್ರಿಟೀಷ ರಾಣಿ ನೇಮಕ ಮಾಡುತ್ತಿದ್ದಳು. 1950 ಜನೇವರಿ 26 ರಿಂದ ನಮ್ಮ ನಾಯಕರನ್ನು ನಾವೇ ಆಯ್ಕೆ ಮಾಡುವ ಅಧಿಕಾರ ದೊರೆಯಿತು. ವಿಶ್ವದಲ್ಲಿಯೇ ನಮ್ಮ ಸಂವಿಧಾನ ಅತ್ಯಂತ ಪ್ರಾಮುಖ್ಯತೆಯನ್ನ ಪಡೆದಿದ್ದು, ನಾವುಗಳೆಲ್ಲರೂ ತಿಳಿದುಕೊಂಡು ಅನುಸರಿಸಿದರೆ ಗಣರಾಜ್ಯೋತ್ಸವ ಆಚರಿಸಿದ್ದಕ್ಕೂ ಸಾರ್ಥಕತೆಯಾಗುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಪ್ರಾಸ್ಥಾವಿಕ ನುಡಿಗಳನ್ನಾಡುತ್ತ, ಧ್ವಜಾರೋಹಣ ನೆರವೇರಿಸಲು ಆಗಮಿಸಿರೋ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿರೋ ನಿವೃತ್ತ ಪ್ರಾಂಶುಪಾಲರಾದ ಬಿ. ಎಫ್. ಚೇಗರಡ್ಡಿ ಅವರು ಉಪಸ್ಥಿತಿಯಲ್ಲಿ ಈ ವರ್ಷದ ಗಣರಾಜ್ಯೋತ್ಸವ ಆಚರಿಸುತ್ತಿರುವದು ನಮಗೆ ಹೆಮ್ಮೆ ತಂದಿದೆ. ಈ ದಿನವನ್ನು ನಾವುಗಳೆಲ್ಲರೂ ಗೌರವಪೂರ್ವಕವಾಗಿ ಆಚರಿಸುವದರೊಂದಿಗೆ ಆಚರಣೆಯಲ್ಲಿ ತರಬೇಕೆಂದರು.
ಇದೇ ವೇಳೆ, ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹಾಗೂ ಬಿ. ಎಫ್. ಚೇಗರಡ್ಡಿ ಅವರನ್ನು ಚಿಕ್ಕಟ್ಟಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿನಯ್ ಚಿಕ್ಕಟ್ಟಿ ಕಾಲೇಜಿನ ಪ್ರಾಂಶುಪಾಲರಾದ ವಿನಯ್ ಎಸ್. ಚಿಕ್ಕಟ್ಟಿ, ನಿವೃತ್ತ ಶಿಕ್ಷಕರಾದ ವಿ ಬಿ ತಾಳಿ, ಹಿರಿಯ ಉಪನ್ಯಾಸಕರಾದ ಅನೀಲ ನಾಯಕ್ ಉಪಸ್ಥಿತರಿದ್ದರು.
ಬಿ.ಸಿ.ಎ. ಕಾಲೇಜಿನ ಪ್ರಾಂಶುಪಾಲರಾದ ಬಿಪಿನ್ ಎಸ್. ಚಿಕ್ಕಟ್ಟಿ ಅವರು ಸರ್ವರನ್ನೂ ಸ್ವಾಗತಿಸಿದರು.
ಐ.ಸಿ.ಎಸ್.ಸಿ. ಶಾಲೆಯ ವಿದ್ಯಾರ್ಥಿನಿಯರಾದ ನಿವೇದಿತ ತೆರದಾಳ, ಶ್ರಾವಣಿ ಗುಗ್ಗರಿ, ಹಾಗೂ ದಿಕ್ಷಿತಾ ಇ. ಎಸ್. ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿನಿಯರಾದ ಸಂಜನಾ ಆರ್. ಪ್ರಸಾದ, ಸೋನಿಕಾ ಎಸ್. ಪೂಜಾರ, ಸುಪ್ರೀತಾ ಎಮ್. ನೀಲಗುಂದ ಹಾಗೂ ನಿವೇದಿತಾ ಎಸ್. ಪವಾಡಿಗೌಡರ ಸಾಧಕರ ಪರಿಚಯವನ್ನು ಮಾಡಿದರು. ಆಡಳಿತಾಧಿಕಾರಿಗಳಾದ ಕಲಾವತಿ ಕೆಂಚರಾಹುತ ವಂದನೆಗೈದರು.
ನಂತರ ಮಕ್ಕಳಿಂದ ದೇಶಭಕ್ತಿಗಿತೆಯುಳ್ಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಕಾಲೇಜಿನ ಉಪನ್ಯಾಸಕರು ಹಾಗೂ ಶಿಕ್ಷಕವರ್ಗ ಮತ್ತು ಸಿಬ್ಬಂದಿಗಳು ಹಾಜರಿದ್ದರು.
