ಗದಗ: ಗದಗನಲ್ಲಿ ಪೊಲೀಸರು ಬಡ್ಡಿದಂಧೆಕೋರರನ್ನ ಮಟ್ಟಹಾಕಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹೀಗೆ ಗದಗನಲ್ಲಿ ಸುಮಾರು 20 ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಹಲವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ…! ಇದರಲೊಬ್ಬ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದಾನೆ. ಅದು ಬಡ್ಡಿ ಹಣ ಅಲ್ಲ ಮಗನಿಗಾಗಿ ಚಿಕಿತ್ಸೆ ನೀಡೋದಕ್ಕೆ ಸಂಗ್ರಹಿಸಿ ತಂದಿಟ್ಟಿದ್ದ ಹಣವನ್ನ ಪೊಲೀಸರು ಜಪ್ತಿ ಮಾಡಿದ್ದಾರೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದು, ಪ್ರಕರಣ ತಿರುವು ಪಡೆದುಕೊಂಡಿದೆ.
ಹೌದು ಅಕ್ರಮ ಬಡ್ಡಿ ದಂಧೆ ಮಾಡ್ತಿರೋ ಆರೋಪ ಎದುರಿಸುತ್ತಿದ್ದ ಸಂಗಮೇಶ ದೊಡ್ಡಣ್ಣವರ್ ನಿನ್ನೆ ಸಂಜೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಗದಗ ನಗರದ ಕಾಶಿವಿಶ್ವನಾಥ ಕಾಲೋನಿಯ ಮನೆಯಲ್ಲಿ ನಿನ್ನೆ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಗೆ ಯತ್ನಿಸಿದ್ದಾನೆ. ನೇಣಿನ ಕುಣಿಕೆಯಲ್ಲಿ ಒದ್ದಾಡುತ್ತಿದ್ದ ಸಂಗಮೇಶನನ್ನ ನೋಡಿದ ಆತನ ತಾಯಿ ಹಾಗೂ ಸ್ಥಳೀಯರು ರಕ್ಷಣೆ ಮಾಡಿ ತಕ್ಷಣ ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆತನ ಪರಿಸ್ಥಿತಿ ಚಿಂತಾಜನಿಕವಾಗಿದ್ದು ಹುಬ್ಬಳ್ಳಿ ಎಸ್ ಡಿ ಎಂ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಿದ್ದಾರೆ. ಸದ್ಯ ಕತ್ತಿನಲ್ಲಿ ಬೆನ್ನಿನ ನರ ಕಟ್ ಆಗಿರಬಹುದು ಅಂತ ಆಸ್ಪತ್ರೆ ವೈದ್ಯರು ಅನುಮಾನಿಸಿದ್ದಾರೆ.

ಹೀಗಾಗಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾನೆ. ಇನ್ನು ಮುಖ್ಯವಾಗಿ ಕಳೆದ 9 ನೇ ತಾರೀಖಿನಂದು ಆತನ ಮನೆ ಮೇಲೆ ಪೊಲೀಸರು ಬೆಳ್ಳಂ ಬೆಳಿಗ್ಗೆ ರೇಡ್ ಮಾಡಿ ಸುಮಾರು 26 ಲಕ್ಷ ರೂ ಜಪ್ತಿ ಮಾಡಿಕೊಂಡು ಆತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಅದೇ ಕಾರಣಕ್ಕೆ ಬಹಳಷ್ಟು ಮಾನಸಿಕವಾಗಿ ಕುಂದಿದ್ದನೆಂದು ಅಂತ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಇನ್ನು ಪೆ.9 ರಂದು ಗದಗ ಬೆಟಗೇರಿ ಅವಳಿ ನಗರದಲ್ಲಿರುವ ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ ಮಾಡಿದ್ದರು ಸುಮಾರು 12 ಕಡೆ ದಾಳಿ ಮಾಡಿ ಸುಮಾರು 9 ಜನರನ್ನ ವಶಕ್ಕೆ ಪಡೆದಿದ್ದರು. ಈ ವೇಳೆ ಸಂಗಮೇಶ ದೊಡ್ಡಣ್ಣವರ ಮನೆ ಮೇಲೆಯೂ ದಾಳಿ ಮಾಡಿದ್ದರು. ಅಂದು ಈತನ ಮನೆ ಮೇಲೆ ಪೊಲೀಸರು ದಾಳಿ ಮಾಡಿದಾಗ ಮನೆಯಲ್ಲಿ ಕಂತೆ ಕಂತೆ ಹಣ ಪೊಲೀಸರಿಗೆ ಸಿಕ್ಕಿತ್ತು. ಸುಮಾರು 26 ಲಕ್ಷ ರೂ ಹಾಗೂ ಕೆಲವು ಖಾಲಿ ಚೆಕ್ ಬಾಂಡ್ ಸಿಕ್ಕಿದ್ದವು. ಈ ಬಗ್ಗೆ ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದ್ರೆ ಈಗ ಕುಟುಂಬಸ್ಥರು ಹೇಳ್ತಿರೋದೇ ಬೇರೆ.
ಪೊಲೀಸರ ಮೇಲೆ ಕೆಂಡ ಕಾರುತ್ತಿರುವ ಕುಟುಂಬಸ್ಥರು, ಮನೆಯಲ್ಲಿ ಸಿಕ್ಕಿರೋ ಕಂತೆ ಕಂತೆ ಹಣ ಅದು ಬಡ್ಡಿ ದಂಧೆಯದ್ದಲ್ಲ, ಆತನ ಮಗ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಆತನಿಗೆ ಚಿಕಿತ್ಸೆ ಕೊಡಿಸೋಕೆ ಸಂಬಂಧಿಕರ ಬಳಿ ಹಣ ಕೂಡಿಸಿ ಸಂಗ್ರಹಿಸಿ ಇಟ್ಟಿದ್ದರು.ಆದ್ರೆ ಈಗ ಪೊಲೀಸರು ಜಪ್ತಿ ಮಾಡಿದ್ದಕ್ಕೆ ಮಗನಿಗೆ ಚಿಕಿತ್ಸೆ ಕೊಡಿಸೋದಕ್ಕೂ ಆಗ್ತಿಲ್ಲ. ಜೊತೆಗೆ ಸಾಲ ಮಾಡಿ ತಂದಿದ್ದ ಹಣ ವಾಪಸ್ ಹೇಗೆ ಕೊಡೋದು ಅಂತ ಚಿಂತೆಗೀಡಾಗಿದ್ದಾನೆ. ಹೀಗಾಗಿ ಆತ ಈ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾನೆ ಅಂತ ಹೇಳ್ತಿದ್ದಾರೆ. ಇದಕ್ಕೆಲ್ಲ ಕಾರಣ ಪೊಲೀಸರ ವರ್ತನೆಯೇ ಅಂತ ಪೊಲೀಸರ ಮೇಲೆ ಬೊಟ್ಟು ಮಾಡ್ತಿದ್ದಾರೆ
ಇನ್ನು ಬಡ್ಡಿದಂಧೆಕೋರರನ್ನ ಮಟ್ಟ ಹಾಕುವ ನೆಪದಲ್ಲಿ ಸೇಡಿನ ರಾಜಕಾರಣವೂ ನಡೆಯುತ್ತಿದೆ ಅನ್ನುವ ಮಾತುಗಳು ಕೇಳಿಬರ್ತಿವೆ. ನಿಜವಾದ ಬಡ್ಡಿದಂಧೆಕೋರರ ಮಟ್ಟ ಹಾಕಿ ನೊಂದ ಬಡವರಿಗೆ ನ್ಯಾಯ ಕೊಡಿಸಿ. ಆದ್ರೆ ಸೇಡು ತೀರಿಸಿಕೊಳ್ಳಲು ಕೆಲವರನ್ನ ವಿನಾಕಾರಣ ಈ ಪ್ರಕರಣದಲ್ಲಿ ಸಿಲುಕಿಸಲಾಗ್ತಿದೆ ಅನ್ನೋ ಆರೋಪವೂ ಕೇಳಿ ಬರ್ತಿದೆ.
ಹೀಗಾಗಿ ಕೆಲವರು ಈಗಾಗಲೇ ಗದಗ ಬೆಟಗೇರಿ ಬಿಟ್ಟು ಓಡಿ ಹೋಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಒಟ್ಟಾರೆ ಬಡ್ಡಿ ದಂಧೆಕೋರರ ಮಟ್ಟಹಾಕಲು ಪೊಲೀಸರ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಆದ್ರೆ ಈ ಪ್ರಕರಣದಲ್ಲಿ ಪೊಲೀಸರು ಹೇಳ್ತಿರೋದು ಒಂದಾದರೆ ಸಂಬಂಧಿಕರು ಹೇಳ್ತಿರೋದು ಇನ್ನೊಂದು ಚರ್ಚೆಗೆ ಕಾರಣವಾಗಿದೆ. ಒಟ್ಟಾರೆ ಸತ್ಯಾಸತ್ಯತೆಗೆ ನ್ಯಾಯ ಸಿಗಬೇಕಿದೆ.