ಗದಗ: ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಇತ್ತೀಚೆಗೆ ನಡೆದ ಪದವಿ ಪೂರ್ವ ದ್ವಿತೀಯ ವರ್ಷದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವು ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ ಗದಗ, ಜಿಲ್ಲಾ ಪಂಚಾಯತ್, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸನ್ಮಾನ್ಯ ಡಾ. ಎಚ್.ಕೆ. ಪಾಟೀಲ (ಶಾಸನ ರಚನೆ ಮತ್ತು ಪ್ರವಾಸೋಧ್ಯಮ ಇಲಾಖೆ ಸಚಿವರು, ಗದಗ ಜಿಲ್ಲಾ ಉಸ್ತುವಾರಿ ಸಚಿವರು) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, 100ಕ್ಕೆ 100 ಫಲಿತಾಂಶ ತಂದುಕೊಟ್ಟ ಉಪನ್ಯಾಸಕರನ್ನು ಹಾಗೂ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. “ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಶಿಕ್ಷಕರ ಹಾಗೂ ಪಾಲಕರ ಪರಿಶ್ರಮ ಬಹುಮೌಲ್ಯವಾದದ್ದು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರುವಂತೆ ಆಗಲಿ,” ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕುಮಾರಿ ಸನಾ ನರೇಗಲ್ ಹಾಗೂ ಕುಮಾರ ಪ್ರಜ್ವಲ್ ಅಂಗಡಿ ಅವರಿಗೆ ಸನ್ಮಾನ ಸಲ್ಲಿಸಲಾಯಿತು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಕುಮಾರಿ ಸನಾ ನರೇಗಲ್ ವಾಣಿಜ್ಯ ವಿಭಾಗದಲ್ಲಿ ಶೇ. 98.33 ಅಂಕಗಳೊಂದಿಗೆ, ಸಂಖ್ಯಾಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ಗದಗ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದು ಖ್ಯಾತಿ ಗಳಿಸಿದ್ದಾರೆ.
ಕುಮಾರ ಪ್ರಜ್ವಲ್ ಅಂಗಡಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, ಗಣಿತಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಂಸ್ಥೆಯ ಚೇರ್ಮನ್ ಶ್ರೀ ರಾಜೇಶ ಕುಲಕರ್ಣಿ ಅವರು ಇಬ್ಬರು ವಿದ್ಯಾರ್ಥಿಗಳನ್ನು ಹಾರ್ದಿಕವಾಗಿ ಅಭಿನಂದಿಸಿದ್ದು, ಅವರ ಯಶಸ್ಸಿಗೆ ಕಾರಣರಾದ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕ ವರ್ಗವನ್ನು ಶ್ಲಾಘಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರೊ. ರೋಹಿತ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಉಡುಪಿ ದೇಶಪಾಂಡೆ, ಪ್ರೊ. ಸಯ್ಯದ್ ಮತೀನ್ ಮುಲ್ಲಾ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಶ್ರೀ ಎಮ್.ಸಿ. ಹಿರೇಮಠ ಹಾಗೂ ಕಾಲೇಜಿನ ಇತರೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಾಧಕರ ಭವಿಷ್ಯ ಉತ್ತುಂಗಕ್ಕೇರಲಿ ಎಂಬ ಹಾರೈಕೆಯನ್ನು ಎಲ್ಲರೂ ವ್ಯಕ್ತಪಡಿಸಿದರು.