ಗುಜರಾತ್‌ನ ಖೆಡಾ ಜಿಲ್ಲೆಯ ವಡತಾಲ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವು 200 ವರ್ಷ ಪೂರೈಸಿರುವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಲವು ದೇಶ ವಿರೋಧಿ ಶಕ್ತಿಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿವೆ ಎಂದರು.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಜನರ ನಡುವಿನ ಒಗ್ಗಟ್ಟು ಮತ್ತು ರಾಷ್ಟ್ರದ ಸಮಗ್ರತೆ ಮುಖ್ಯವಾಗಿದೆ. ಆದರೆ, ದುರದೃಷ್ಟವಶಾತ್ ಕೆಲವರು ಜಾತಿ, ಧರ್ಮ, ಭಾಷೆ, ಲಿಂಗ, ಗ್ರಾಮ–ನಗರದ ಆಧಾರದಲ್ಲಿ ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.’ನಾವು ದೇಶ ವಿರೋಧಿಗಳ ದುರುದ್ದೇಶವನ್ನು ಅರ್ಥಮಾಡಿಕೊಂಡು ಅವರನ್ನು ಸೋಲಿಸಲು ಒಂದಾಗಬೇಕು’ ಎಂದು ಕರೆ ನೀಡಿದರು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮೊದಲ ಪ್ರಮುಖ ಹೆಜ್ಜೆ ‘ಆತ್ಮನಿರ್ಭರತೆ’ ಎಂದು ಹೇಳಿದರು. ದೇಶವನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಲು ಪಣತೊಟ್ಟಿರುವ ನಾಗರಿಕರ ಜತೆ ಸ್ವಾಮಿನಾರಾಯಣ ಪಂಥದ ಎಲ್ಲ ಸಂತರು ಕೈಜೋಡಿಸಬೇಕು ಎಂದು ವಿನಂತಿಸಿದರು. ವಡತಾಲ್ ಸ್ವಾಮಿ ನಾರಾಯಣ ದೇವಸ್ಥಾನದೊಂದಿಗಿನ ತಮ್ಮ ನಂಟು, ಗುಜರಾತ್ ಮುಖ್ಯಮಂತ್ರಿಯಾಗಿದ್ದ ದಿನಗಳಿಂದಲೂ ಇದೆ ಎಂದು ಹೇಳಿದರು. ಸ್ವಾಮಿನಾರಾಯಣ ದೇವಸ್ಥಾನವು ಎರಡು ಶತಮಾನಗಳನ್ನು ಪೂರೈಸಿರುವ ನೆನಪಿಗಾಗಿ ಕೇಂದ್ರ ಸರ್ಕಾರವು ಈಚೆಗೆ ನಾಣ್ಯವನ್ನು ಬಿಡುಗಡೆ ಮಾಡಿದೆ